ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ರ ಜಾಮೀನು ನೀಡುವಂತೆ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್ ಅವರು ಕೋರ್ಟ್ ಮುಂದೆ ಹಲವು ಅಂಶಗಳನ್ನು ಗಮನಕ್ಕೆ ತಂದಿದ್ದಾರೆ.ಹೌದು 57ನೇ ಸಿಸಿಹೆಚ್ ಕೋರ್ಟ್ನ ನ್ಯಾ. ಜೈ ಶಂಕರ್ ಪೀಠದಲ್ಲಿ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಸದ್ಯ ವಾದ-ಪ್ರತಿವಾದ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ಪ್ರಬಲವಾದ ವಾದ ಮಂಡಿಸುತ್ತಿದ್ದಾರೆ. ನಟನ ವಿರುದ್ಧದ ಎಲ್ಲ ಸಾಕ್ಷ್ಯಗಳು ಫ್ಯಾಬ್ರಿಕೇಟೆಡ್ ಎಂದು ಹೇಳಿದ್ದಾರೆ. ದರ್ಶನ್ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಲಕ್ಷಾಂತರ ರೂಪಾಯಿ ಹಣದ ಮೂಲದ ಬಗ್ಗೆ ನ್ಯಾಯಾಲಕ್ಕೆ ಮಾಹಿತಿ ನೀಡಿದರು.
ಜೂ 18ರಂದು ದರ್ಶನ್ ಮನೆಯಲ್ಲಿ 37.5 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದಾದ ಬಳಿಕ ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅದೇ ಸಮಯದಲ್ಲಿ ನೀಡಿದ್ದಾರೆ ಎನ್ನಲಾದ ಹಣವನ್ನು ವಿಜಯಲಕ್ಷ್ಮಿ ಅವರೇ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಹಣ ಬರ್ಖಾಸ್ತು ಮಾಡಿರುವ ಬಗ್ಗೆ ಇಂದು ವಾದ ಮಂಡಿಸಿದ ಸಿವಿ ನಾಗೇಶ್, ಹಣದ ಮೂಲದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
‘ಸಾಕ್ಷಿಗಳಿಗೆ ಕೊಡಲೆಂದು ದರ್ಶನ್ ಈ ಹಣ ಇಟ್ಟಿದ್ದಾರೆ ಎಂಬುದಾಗಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ ಮೋಹನ್ ರಾಜ್ ಎಂಬುವರು ಈ ಹಣವನ್ನು ಮೇ 2ನೇ ತಾರೀಖಿನಂದೇ ದರ್ಶನ್‌ಗೆ ನೀಡಿದ್ದರು. ಅಸಲಿಗೆ ಇವರು ದರ್ಶನ್ ಅವರಿಂದ ಹಣ ಸಾಲ ಪಡೆದಿದ್ದರು. ಆ ಹಣವನ್ನು ಮೇ 2ರಂದೇ ದರ್ಶನ್‌ಗೆ ನೀಡಬೇಕಿದ್ದ ಸಾಲ ವಾಪಸ್ ಮಾಡಿದ್ದರು. ಆಗ ರೇಣುಕಾಸ್ವಾಮಿ ಯಾರೆಂಬುದು ಜಗತ್ತಿಗೇ ಗೊತ್ತಿರಲಿಲ್ಲ’ ಎಂದರು ಸಿವಿ ನಾಗೇಶ್.
‘ಮೋಹನ್ ರಾಜ್ ಪುತ್ರಿಯ ಡ್ಯಾನ್ಸ್ ಆಲ್ಬಂ ಮಾಡಿಸಬೇಕಿತ್ತು, ದರ್ಶನ್ ಈ ಮುಂಚೆ ಮಾಲೀಕರಾಗಿದ್ದ ಡಿ ಬೀಟ್ಸ್ ಅವರ ಕಡೆಯವರಿಗೆ ಹೇಳಿ ಈ ಡ್ಯಾನ್ಸ್ ಆಲ್ಬಂ ಮಾಡಿಸಿಕೊಟ್ಟಿದ್ದರು. ಇದಕ್ಕಾಗಿ ದರ್ಶನ್‌ರಿಂದ 40 ಲಕ್ಷ ರೂಪಾಯಿ ಹಣ ಫೆಬ್ರವರಿಯಲ್ಲಿ ಪಡೆದಿದ್ದೆ, ಅದನ್ನು ಮೇ 2ರಂದು ಹಿಂತಿರುಗಿಸಿದ್ದಾಗಿ ಮೋಹನ್ ರಾಜ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗಿದ್ದಾಗ ರೇಣುಕಾ ಸ್ವಾಮಿ ಕೊಲೆ ಆದ ಬಳಿಕ ದರ್ಶನ್ ಹಣ ಸಂಗ್ರಹಿಸಿದ್ದರೆಂದು ಹೇಳುವುದು ಹೇಗೆ’ ಎಂದು ನಾಗೇಶ್ ಅನುಮಾನ ವ್ಯಕ್ತಪಸಿದರು.