ಬಳ್ಳಾರಿ: ದರ್ಶನ್ ಅವರು ಬೆಂಗಳೂರು ಜೈಲಿನಲ್ಲಿ ಹಾಯಾಗಿ ಇದ್ದರು. ಬೇಕಾದ ವ್ಯವಸ್ಥೆಗಳು ಸಿಗುತ್ತಿದ್ದವು. ಆದರೆ, ಬಳ್ಳಾರಿ ಜೈಲಿನಲ್ಲಿ ಅವರ ಪರಿಸ್ಥಿತಿ ಹದಗೆಟ್ಟಿದೆ. ಅವರು ಪ್ರತಿ ವಿಚಾರಕ್ಕೂ ಕೋರ್ಟ್ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಒಂದು ಕಡೆ ಅವರು ಜಾಮೀನಿಗಾಗಿ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಬೆನ್ನುನೋವಿನ ಸಮಸ್ಯೆಯಿಂದ ರಾತ್ರಿ ನಿದ್ದೆ ಮಾಡದೆ ಒದ್ದಾಡಿದ್ದಾರೆ. ಬೆನ್ನು ನೋವಿಗೆ ದರ್ಶನ್ ಸರ್ಜರಿಗೆ ಒಳಗಾಗಲೇ ಬೇಕಿದೆ. ಸರ್ಜರಿ ಮಾಡಿಸದಿದ್ದರೆ ಕಷ್ಟ ಎಂದು ವೈದ್ಯರು ಹೇಳುತ್ತಿದ್ದಾರೆ.
ಇದರ ಬೆನ್ನಲ್ಲೇ ಗಂಡನ ಭೇಟಿಗೆ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ವಿಜಯಲಕ್ಷ್ಮಿ ಜೊತೆ ಸುಶಂತ್ ನಾಯ್ಡು,ಅನುಷಾ ಶೆಟ್ಟಿ, ರೋಹಿತ್ ಗ್ರೇಸ್ ಮರ್ಸಿ ಕೂಡಾ ಆಗಮಿಸಿದ್ದಾರೆ. ಸುಶಾಂತ್ ನಾಯ್ಡು ಅವರು ಎರಡು ಬ್ಯಾಗ್ ತೆಗೆದುಕೊಂಡು ಬಂದಿದ್ದರು. ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗೆ ಬೇಕಾದ ಬಟ್ಟೆ, ಡ್ರೈ ಫ್ರೂಟ್ಸ್, ಬೇಕರಿ ತಿನಿಸು ತಂದಿದ್ದಾರೆ. ಸಂದರ್ಶಕರ ಕೊಠಡಿಗೆ ವಿಜಯಲಕ್ಷ್ಮಿ ಹಾಗೂ ಇತರರು ತೆರಳಿದ್ದಾರೆ. ದರ್ಶನ್ ಗೆ ಬೆನ್ನುನೋವು ಹಿನ್ನಲೆ ಆರೋಗ್ಯ ವಿಚಾರಣೆ ಮಾಡಲು ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಬಂದಿದ್ದಾರೆ.
ನಟ ದರ್ಶನ್ ಅವರು ಜೈಲು ಸೇರಿದಾಗಿನಿಂದಲೂ ಅವರ ಬೆನ್ನು ನೋವಿನ ಸಮಸ್ಯೆ ಬಗ್ಗೆ ಸುದ್ದಿಯಾಗುತ್ತಲೇ ಇತ್ತು. ಇದಕ್ಕಾಗಿಯೇ ನಟನಿಗೆ ಸರ್ಜಿಕಲ್ ಚೇರ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಷ್ಟೇ ಅಲ್ಲದೆ ನಟ ಫಾರಿನ್ ಟಾಯ್ಲೆಟ್ ಬೇಕು ಎಂದು ಬೇಡಿಕೆ ಕೂಡಾ ಇಟ್ಟಿದ್ದರು. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ ಎನ್ನಲಾಗಿದೆ.