ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಬಂಧಿಯಾಗಿರುವ ದರ್ಶನ್ ಬೇಲ್ ಪಡೆದು ಹೊರ ಬರುವ ದಿನಕ್ಕಾಗಿ ಕಾಯ್ತಿದ್ದಾರೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಅವರು ಪ್ರಬಲ ವಾದ ಮಂಡಿಸಿದ್ರು. ಗಂಟೆಗಟ್ಟಲೆ ದರ್ಶನ್ ಪರ ವಾದಿಸಿದ್ರು. ಇನ್ನೂ ದರ್ಶನ್ ಪರ ವಕೀಲ ಸಿವಿ ನಾಗೇಶ್ ಹಾಗೂ ಎಸ್ಪಿಪಿ ಪ್ರಸನ್ನ ಕುಮಾರ್ ನಡುವೆ ತುರುಸಿನ ವಾದ-ಪ್ರತಿವಾದಗಳು ನಡೆದಿವೆ.
ಇಬ್ಬರೂ ವಕೀಲರು ಕಟುವಾದ ವಾದ ಸರಣಿಯನ್ನು ನ್ಯಾಯಾಲಯದ ಮುಂದಿರಿಸಿದ್ದಾರೆ. ಇಂದೂ ಸಹ ವಾದ ನಡೆದಿದ್ದು, ಇಬ್ಬರೂ ವಕೀಲರು ತಮ್ಮ ವಾದಗಳನ್ನು ಅಂತ್ಯಗೊಳಿಸಿದ್ದು, ನ್ಯಾಯಾಧೀಶರು ಆದೇಶವನ್ನು ಅಕ್ಟೋಬರ್ 14ಕ್ಕೆ ಕಾಯ್ದಿರಿಸಿದ್ದಾರೆ. ಇಂದು ನಡೆದ ವಾದದಲ್ಲಿ ಸಿವಿ ನಾಗೇಶ್, ಎಸ್ಪಿಪಿ ಅವರು ಕಳೆದ ಎರಡು ದಿನಗಳಲ್ಲಿ ಸಲ್ಲಿಸಿದ ವಾದಕ್ಕೆ ಪ್ರತಿವಾದ ಹೂಡಿದರು. ಇಂದು, ನಾಗೇಶ್ ಅವರು, ಆರೋಪಿಗಳು ಮತ್ತು ಸಾಕ್ಷಿಗಳ ಲೊಕೇಶನ್ ಒಂದೇ ಕಡೆ ಇದ್ದವೆಂದು ಪೊಲೀಸರು ಮಾಡಿರುವ ತನಿಖೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಅದಾದ ಬಳಿಕ ಒಬ್ಬ ಸಾಕ್ಷಿಯ ಹೇಳಿಕೆಯನ್ನು 13 ದಿನ ತಡವಾಗಿ ದಾಖಲಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಆ ಸಾಕ್ಷಿಯನ್ನು ಪೊಲೀಸರೇ ಸೃಷ್ಟಿಸಿದ್ದಾರೆ. ಬೇಕೆಂದೆ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಆ ವರದಿಗೆ ಹೋಲಿಕೆ ಆಗುವಂತೆ ಸಾಕ್ಷಿಯಿಂದ ಹೇಳಿಕೆ ಪಡೆಯಲಾಗಿದೆ ಎಂದು ವಾದಿಸಿದರು. ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆಯಲ್ಲಿ ವಕೀಲರ ವಾದ ಅಂತ್ಯವಾಗಿದ್ದು, ಜಾಮೀನು ಅರ್ಜಿ ಕುರಿತ ಆದೇಶವನ್ನು ಅಕ್ಟೋಬರ್ 14 ರಂದು ನ್ಯಾಯಾಧೀಶರು ಹೊರಡಿಸಲಿದ್ದಾರೆ.