ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರಿಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿಲ್ಲ. ಇದು ಅವರನ್ನು ಮತ್ತಷ್ಟು ಕಂಗೆಡಿಸಿದೆ. ದರ್ಶನ್ ಅವರು ಜಾಮೀನಿಗಾಗಿ ಸಾಕಷ್ಟು ಚಡಪಡಿಸಿದ್ದರು. ಮಧ್ಯೆ ದರ್ಶನ್ಗೆ ಬೆನ್ನುನೋವು ಕಾಣಿಸಿಕೊಂಡಿದೆ. ನಿನ್ನೆ ವಕೀಲ ರಾಮ್ ಸಿಂಗ್, ದರ್ಶನ್ ಭೇಟಿಗಾಗಿ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಸಂದರ್ಶಕರ ಕೊಠಡಿಗೆ ಬರುವಾಗ ಬೆನ್ನನ್ನು ಪದೇ ಪದೇ ಮುಟ್ಟಿಕೊಳ್ಳುತ್ತಾ ನೋವಿನಲ್ಲಿಯೇ ಸಂದರ್ಶಕರ ಕೊಠಡಿಗೆ ದರ್ಶನ್ ಬಂದರು.
ಹೆಚ್ಚು ಸಮಯ ನಿಲ್ಲಲು ಸಹ ಆಗದೆ ಗೋಡೆಯ ಆಸರೆ ಪಡೆದು ಹೈಸೆಕ್ಯುರಿಟಿ ಸೆಲ್ ಮುಂದೆ ನಿಂತಿದ್ದರು ದರ್ಶನ್. ದರ್ಶನ್ಗೆ ಜೈಲಿನಲ್ಲಿ ಫಿಜಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಿದ್ದರೂ ಸಹ ಬೆನ್ನು ನೋವು ಕಡಿಮೆ ಆಗಿಲ್ಲ. ದರ್ಶನ್ರ ಬೆನ್ನಿನ ಎಲ್1 ಹಾಗೂ ಎಲ್5 ಭಾಗದಲ್ಲಿ ತೀವ್ರವಾಗಿ ನೋವಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯ ಇದೆಯೆಂದು ವೈದ್ಯರು ಸಲಹೆ ನೀಡಿದ್ದಾರೆ.
ಬೆನ್ನು ನೋವಿಗೆ ಶೀಘ್ರ ಚಿಕಿತ್ಸೆಯ ಅಗತ್ಯ ಇದ್ದು, ದರ್ಶನ್, ತಮ್ಮನ್ನು ಬೆಂಗಳೂರಿಗೆ ಕಳಿಸುವಂತೆ, ಅಲ್ಲಿ ತಮ್ಮ ವೈದ್ಯರ ಬಳಿ ತಾನು ಚಿಕಿತ್ಸೆ ಪಡೆದುಕೊಳ್ಳುವುದಾಗಿ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ತಮ್ಮನ್ನು ಬೆಂಗಳೂರಿಗೆ ಕಳಿಸುವಂತೆ ಅಧಿಕಾರಿಗಳ ಬಳಿ ದರ್ಶನ್ ಗೋಗರೆದಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಬೆನ್ನು ನೋವು ಹೆಚ್ಚಾಗಿರುವ ಕಾರಣ ಸ್ಥಳೀಯ ಆಸ್ಪತ್ರೆಯಿಂದ ಮೆಡಿಕಲ್ ಬೆಡ್ ಅನ್ನು, ಚೇರ್ ಅನ್ನು ಹಾಗೂ ದಿಂಬನ್ನು ದರ್ಶನ್ಗೆ ನೀಡಲಾಗಿದೆ.
ಹಾಗಿದ್ದರೂ ಸಹ ದರ್ಶನ್ ಬೆನ್ನು ನೋವು ಇನ್ನೂ ಕಡಿಮೆ ಆಗಿಲ್ಲ. ದರ್ಶನ್ ಜಾಮೀನು ಪಡೆಯಲು ಈ ರೀತಿ ಬೆನ್ನು ನೋವಿನ ಕಾರಣ ಹೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಸಂಬಂಧಿಸಿ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದರು.