ಜಾಧವ್ ಫ್ಯಾಮಿಲಿ ಗಲಾಟೆ ಪ್ರಕರಣಕ್ಕೆ 6 ದಿನ! FIR ದಾಖಲಾದರೂ 13 ಆರೋಪಿಗಳ ಬಂಧನಕ್ಕೆ ಮೀನಾಮೇಷ.. ಬೆಂಡಿಗೇರಿ ಪೊಲೀಸರ ವಿರುದ್ಧ ಗಂಭೀರ ಆರೋಪ!
ಹುಬ್ಬಳ್ಳಿ: ಎರಡು ಕುಟುಂಬಗಳ ನಡುವಿನ ಗಲಾಟೆ ಪ್ರಕರಣದಲ್ಲಿ ಒಂದು ಗುಂಪಿನ ಏಳು ಜನರನ್ನು ಬಂಧಿಸಿದ ಪೊಲೀಸರು, ಮತ್ತೊಂದು ಗುಂಪಿನ 13 ಆರೋಪಿಗಳ ಬಂಧನಕ್ಕೆ ಮಾತ್ರ ಹಿಂದೇಟು ಹಾಕುತ್ತಿದ್ದಾರಾ? FIR ದಾಖಲಾಗಿ ಆರು ದಿನ ಕಳೆದರೂ ಬಂಧನವಾಗದಿರುವುದೇಕೆ? ಬೆಂಡಿಗೇರಿ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ನಾಯಕ ಅವರ ಕಾರ್ಯವೈಖರಿ ವಿರುದ್ಧ ಈಗ ಪ್ರಶ್ನೆಗಳು ಎದ್ದಿವೆ.
ಹೌದು, ಇದೇ ತಿಂಗಳ 17ರಂದು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ಯಾಮ್ ಜಾಧವ್, ರವಿ ಜಾಧವ್ ಹಾಗೂ ಬಸವರಾಜ್ ಜಾಧವ್ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಬಸವರಾಜ್ ಜಾಧವ್ ಕುಟುಂಬದ ಸದಸ್ಯರು ಶ್ಯಾಮ್ ಜಾಧವ್ ಕುಟುಂಬದವರ ಮೇಲೆಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಅವರೇ ಪೊಲೀಸ್ ಠಾಣೆಗೆ ತೆರಳಿ ಶ್ಯಾಮ್ ಜಾಧವ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಬೆಂಡಿಗೇರಿ ಪೊಲೀಸರು, ಶ್ಯಾಮ್ ಜಾಧವ್ ಪುತ್ರ ಅಭಿಷೇಕ್ ಜಾಧವ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ.
ಆದರೆ, ಪ್ರಕರಣದ ಇನ್ನೊಂದು ಗುಂಪಿನ 13 ಸದಸ್ಯರ ವಿರುದ್ಧವೂ ಕೊಲೆಗೆ ಯತ್ನ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಈವರೆಗೆ ಆ 13 ಆರೋಪಿಗಳ ಬಂಧನವಾಗಿಲ್ಲ ಎಂಬುದು ಮತ್ತೊಂದು ಗುಂಪಿನ ಸದಸ್ಯರ ಆಕ್ಷೇಪವಾಗಿದೆ.
ಒಂದೇ ಪ್ರಕರಣ.. ಎರಡು ದೂರು.. ಪೊಲೀಸರ ಕ್ರಮದಲ್ಲಿ ತಾರತಮ್ಯವೇ?
ಒಂದೇ ಪ್ರಕರಣ.. ಎರಡು ದೂರು.. ಪೊಲೀಸರ ಕ್ರಮದಲ್ಲಿ ತಾರತಮ್ಯವೇ?
ಎರಡೂ ಕುಟುಂಬಗಳ ನಡುವೆ ದೂರು ಮತ್ತು ಪ್ರತಿದೂರು ದಾಖಲಾಗಿರುವಾಗ, ಒಂದು ಗುಂಪಿನ ಏಳು ಜನರನ್ನು ಬಂಧಿಸಿ ಮತ್ತೊಂದು ಗುಂಪಿನ ಆರೋಪಿಗಳ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದಿರುವುದೇಕೆ ಎಂಬ ಪ್ರಶ್ನೆ ಎದುರಾಗಿದೆ.
13 ಆರೋಪಿಗಳ ಬಂಧನಕ್ಕೆ ಪೊಲೀಸರಿಗೆ ಅಡ್ಡಿಯಾಗಿರುವುದಾದರೂ ಏನು? ತನಿಖೆಯ ಕಾರಣದಿಂದ ವಿಳಂಬವಾಗುತ್ತಿದೆಯೇ? ಅಥವಾ ಬೇರೆ ಯಾವುದಾದರೂ ಒತ್ತಡವಿದೆಯೇ? ಎಂಬ ಪ್ರಶ್ನೆಗಳನ್ನು ಸ್ಥಳೀಯರು ಕೇಳುತ್ತಿದ್ದಾರೆ.
ಇನ್ಸ್ಪೆಕ್ಟರ್ ಎಸ್.ಆರ್. ನಾಯಕ ಅವರು ಈ ಆರೋಪಗಳಿಗೆ ಸ್ಪಷ್ಟನೆ ನೀಡಬೇಕಿದೆ. ಆರೋಪಿಗಳ ಬಂಧನಕ್ಕೆ ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಪೊಲೀಸರು ಸಾರ್ವಜನಿಕರಿಗೆ ತಿಳಿಸಬೇಕಿದೆ.
ನಾಯಕರೇ, ಇದು ನ್ಯಾಯಾನಾ?
ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ದೂರು ದಾಖಲಾದ ಮಾತ್ರಕ್ಕೆ ಯಾರೂ ಅಪರಾಧಿಗಳಾಗುವುದಿಲ್ಲ. ಆದರೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಎಲ್ಲರ ವಿರುದ್ಧವೂ ಕಾನೂನುಬದ್ಧ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಬಂಧನ ಅಗತ್ಯವಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ.
ಒಂದು ಗುಂಪಿನ ಏಳು ಜನರ ಬಂಧನವಾಗಿದ್ದರೆ, ಇನ್ನೊಂದು ಗುಂಪಿನ 13 ಆರೋಪಿಗಳ ವಿಚಾರದಲ್ಲಿ ಆಗುತ್ತಿರುವ ವಿಳಂಬಕ್ಕೆ ಬೆಂಡಿಗೇರಿ ಪೊಲೀಸರು ಉತ್ತರ ನೀಡಬೇಕಿದೆ.
ನೋಡಬೇಕು, ಬೆಂಡಿಗೇರಿ ಪೊಲೀಸರು ಈ 13 ಆರೋಪಿಗಳ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು…