ಶಂಕದಿಂದ ಬಂದರೆ ತೀರ್ಥ.. ಕೋಟಿ ವೀರನ ಚಟ್ಟ ಕಟ್ಟಿದ ಹುಬ್ಬಳ್ಳಿ ಪೋಲೀಸರು….

Share to all

ಶಂಕದಿಂದ ಬಂದರೆ ತೀರ್ಥ.. ಕೋಟಿ ವೀರನ ಚಟ್ಟ ಕಟ್ಟಿದ ಹುಬ್ಬಳ್ಳಿ ಪೋಲೀಸರು….ಉದಯ ವಾರ್ತೆ ಇಂಪ್ಯಾಕ್ಟ್ ಸ್ಟೋರಿ ಇದು…

ಹುಬ್ಬಳ್ಳಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡವರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಅಮಾಯಕ ರೈತರನ್ನು ಗುರಿಯಾಗಿಸಿಕೊಂಡು ಭೂ ಕಬಳಿಕೆ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ರಾಘವೇಂದ್ರ ಗೋಕಾಕ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಲವು ದೂರುಗಳು ದಾಖಲಾಗಿದ್ದರೂ ಬಂಧನವಾಗದೆ ಉಳಿದಿದ್ದ ಪ್ರಕರಣಕ್ಕೆ ಇದೀಗ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ ಅವರ ಮಧ್ಯಪ್ರವೇಶದಿಂದ ಹೊಸ ತಿರುವು ಸಿಕ್ಕಿದೆ.

ಬೆಂಡಿಗೇರಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ರಾಘವೇಂದ್ರ ಗೋಕಾಕ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೂ, ಈವರೆಗೆ ಆತನ ಬಂಧನವಾಗಿರಲಿಲ್ಲ. ಈ ವಿಚಾರ ಪೊಲೀಸ್ ಆಯುಕ್ತರ ಗಮನಕ್ಕೆ ಬರುತ್ತಿದ್ದಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಆರೋಪಿಯನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೂ ವಂಚನೆ ಆರೋಪ!

ಈ ಪ್ರಕರಣದಲ್ಲಿ ಶಿರೀನ್ ಬಜಂತ್ರಿ ಎಂಬ ಮಹಿಳೆಗೆ ವಂಚನೆ ಮಾಡಿರುವ ಗಂಭೀರ ಆರೋಪವೂ ರಾಘವೇಂದ್ರ ಗೋಕಾಕ್ ವಿರುದ್ಧ ಕೇಳಿಬಂದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿರೀನ್, ಅನಾರೋಗ್ಯದ ನಡುವೆಯೂ ನ್ಯಾಯಕ್ಕಾಗಿ ಹೋರಾಟ ನಡೆಸಿ ಗೋಕಾಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದುರದೃಷ್ಟವಶಾತ್, ನ್ಯಾಯಕ್ಕಾಗಿ ಹೋರಾಡುತ್ತಿದ್ದ ಶಿರೀನ್ ಇದೀಗ ಮೃತಪಟ್ಟಿದ್ದಾರೆ. ಅವರ ಸಾವಿನ ಬಳಿಕವಾದರೂ ಪ್ರಕರಣಕ್ಕೆ ವೇಗ ಸಿಕ್ಕಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಪೊಲೀಸ್ ಆಯುಕ್ತರ ಸೂಚನೆ ಬೆನ್ನಲ್ಲೇ ಬಂಧನ!

ಪ್ರಕರಣಗಳಿದ್ದರೂ ಆರೋಪಿಯ ಬಂಧನವಾಗದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಬೆಂಡಿಗೇರಿ ಹಾಗೂ ವಿದ್ಯಾನಗರ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಘವೇಂದ್ರ ಗೋಕಾಕ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕೇಶ್ವಾಪುರದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ?

ಅಮಾಯಕ ಜನರಿಗೆ ವಂಚನೆ ಮಾಡಿ ಸಂಪಾದಿಸಿದ ಹಣದಲ್ಲಿ ಕೇಶ್ವಾಪುರದಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಆರೋಪಗಳ ಹಿಂದಿರುವ ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.

ಶಶಿಕಾಂತ್ ಚಿನ್ನದಕೈ ವಿಚಾರಣೆಗೆ ಕರೆ?

ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಶಶಿಕಾಂತ್ ಚಿನ್ನದಕೈ ಜಾಮೀನಿನ ಮೇಲೆ ಹೊರಬಂದಿದ್ದಾನೆ ಎನ್ನಲಾಗಿದೆ. ಇದೀಗ ರಾಘವೇಂದ್ರ ಗೋಕಾಕ್ ಬಂಧನದ ಬೆನ್ನಲ್ಲೇ ಶಶಿಕಾಂತ್ ಚಿನ್ನದಕೈ ನನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ ಎಂಬ ಚರ್ಚೆ ನಡೆಯುತ್ತಿದೆ.

ಪೊಲೀಸ್ ಅಧಿಕಾರಿಯ ಕೈವಾಡದ ಆರೋಪ!

ಇನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂ ಕಬಳಿಕೆ ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ರಾಘವೇಂದ್ರ ಗೋಕಾಕ್ ಜೊತೆ ಓರ್ವ ಪೊಲೀಸ್ ಅಧಿಕಾರಿಯೂ ಪಾಲುದಾರನಾಗಿ ಶಾಮೀಲಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಆರೋಪದ ಸತ್ಯಾಸತ್ಯತೆ ಬಯಲಾಗಬೇಕಾದರೆ ನಿಷ್ಪಕ್ಷಪಾತ ತನಿಖೆ ಅತ್ಯಗತ್ಯವಾಗಿದೆ.

ಸಾರ್ವಜನಿಕರ ಆಗ್ರಹ…

ಬಡವರು, ಮಧ್ಯಮ ವರ್ಗದವರು ಹಾಗೂ ರೈತರ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಾವುದೇ ರಾಜಕೀಯ ಅಥವಾ ಪೊಲೀಸ್ ಪ್ರಭಾವಕ್ಕೆ ಮಣಿಯದೆ ತನಿಖೆ ನಡೆಸಬೇಕು. ನಕಲಿ ದಾಖಲೆಗಳ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಒಟ್ಟಿನಲ್ಲಿ, ಹಲವು ಆರೋಪಗಳು ಹಾಗೂ ದೂರುಗಳ ನಡುವೆಯೂ ಬಂಧನವಾಗದೆ ಉಳಿದಿದ್ದ ರಾಘವೇಂದ್ರ ಗೋಕಾಕ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಈ ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ? ನಕಲಿ ದಾಖಲೆಗಳ ಜಾಲದ ಹಿಂದೆ ಇನ್ನೂ ಯಾರ್ಯಾರಿದ್ದಾರೆ? ಪೊಲೀಸ್ ಅಧಿಕಾರಿಯ ಕೈವಾಡದ ಆರೋಪಕ್ಕೆ ಸಾಕ್ಷ್ಯ ಸಿಗಲಿದೆಯೇ? ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯೇ ಉತ್ತರ ನೀಡಬೇಕಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author