ಹುಬ್ಬಳ್ಳಿಯಲ್ಲಿ ಪುಂಡರ ಹಾವಳಿ! ಪೊಲೀಸರ ಭಯವೇ ಇಲ್ಲದಾಯ್ತಾ ಪುಂಡರಿಗೆ? ಹೃದಯಭಾಗದಲ್ಲೇ ಜನರ ಮೇಲೆ ಹಲ್ಲೆ, ಹಣ ದೋಚುವ ಯತ್ನ!
ಹುಬ್ಬಳ್ಳಿ:-ಹುಬ್ಬಳ್ಳಿ ನಗರದ ಹೃದಯಭಾಗವಾದ ಚೆನ್ನಮ್ಮ ವೃತ್ತದಲ್ಲಿ ಪುಂಡರ ಹಾವಳಿ ಮಿತಿ ಮೀರಿದೆಯಾ? ಸಾರ್ವಜನಿಕರ ಸುರಕ್ಷತೆಗೆ ಆತಂಕ ಎದುರಾಗಿದೆಯಾ?
ಚೆನ್ನಮ್ಮ ವೃತ್ತದಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಹಣ ಕಸಿದುಕೊಳ್ಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪರ ಊರುಗಳಿಂದ ಹುಬ್ಬಳ್ಳಿಗೆ ಬರುವ ಜನರೇ ಈ ಪುಂಡರ ಟಾರ್ಗೆಟ್ ಆಗಿದ್ದಾರಾ ಎಂಬ ಆತಂಕ ಇದೀಗ ವ್ಯಕ್ತವಾಗಿದೆ.
ಕಳೆದ ರಾತ್ರಿ ಕೂಡ ಕೆಎಸ್ಆರ್‌ಟಿಸಿ ಬಸ್ ಚಾಲಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಹಣ ದೋಚಲು ಯತ್ನಿಸಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಘಟನೆ ನಡೆದ ಸ್ಥಳದಿಂದ ಕೂಗಳತೆಯ ದೂರದಲ್ಲೇ ಉಪನಗರ ಪೊಲೀಸ್ ಠಾಣೆ ಇದೆ. ಆದರೂ ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆಯಾ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ವ್ಯಾಪಾರ, ಉದ್ಯೋಗ ಹಾಗೂ ಇನ್ನಿತರ ಕೆಲಸಗಳಿಗಾಗಿ ಬೇರೆ ಬೇರೆ ಊರುಗಳಿಂದ ಹುಬ್ಬಳ್ಳಿಗೆ ಬರುವ ಜನರು ಇಂತಹ ಘಟನೆಗಳಿಂದ ಆತಂಕಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಘಟನೆಗಳು ಮುಂದುವರಿದರೆ ಹುಬ್ಬಳ್ಳಿಗೆ ಬರಲು ಹೊರ ಊರಿನ ಜನರು ಹಿಂದೇಟು ಹಾಕುವಂತಾಗಬಹುದು.
ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರಿಗೆ ಸುರಕ್ಷತೆ ಯಾವಾಗ? ಪುಂಡರ ಹಾವಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಯಾವ ಕ್ರಮ ಕೈಗೊಳ್ಳಲಿದೆ?
ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕಿದೆ.