ಮಳೆ ಪ್ರಮಾಣ ಹೆಚ್ಚಳ ಜಲಪಾತಕ್ಕೆ ಪ್ರವಾಸಿಗರ ನಿರ್ಭಂದ..ಅರಣ್ಯ ಅಧಿಕಾರಿಗಳ ಆದೇಶ ಉಲ್ಲಂಘನೆ..ಹುಬ್ಬಳ್ಳಿ ಮೂಲದ ಇಬ್ಬರ ಬಂಧನ.
ಯಲ್ಲಾಪುರ (ಇಡಗುಂದಿ):-ಇಡುಗುಂದಿ ವಲಯದ ಇಡುಗುಂದಿ ಶಾಖಾ ವ್ಯಾಪ್ತಿಯ ಮಾಗೋಡು ಗ್ರಾಮದಲ್ಲಿ ಬರುವ ಕುಳಿಮಾಗೋಡು ಜಲಪಾತಕ್ಕೆ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದ್ದು ಪ್ರವಾಸಿಗರ ಜೀವಕ್ಕೆ ಹಾನಿಯಾಗುವ ಸಂಭವವಿರುವುದರಿಂದ ಸದರಿ ಜಲಪಾತಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಅರಣ್ಯ ಇಲಾಖೆಯ ಆದೇಶ ಮೀರಿ ಹುಬ್ಬಳ್ಳಿಯ ಶ್ರೀಧರ ಈರಣ್ಣ ಪೂಜಾರ ವಯಸ್ಸು 32 ವರ್ಷ ಹಾಗೂ ವಿನಾಯಕ ಶರಣಪ್ಪ ನಾಗರಾಳ ವಯಸ್ಸು 28 ವರ್ಷ ಇವರಿಬ್ಬರು ಕರ್ನಾಟಕ ಅರಣ್ಯ ಕಾಯ್ದೆ ಯನ್ನು ಉಲ್ಲಂಘಿಸಿ, ಅನಧಿಕೃತವಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರವೇಶಿಸಿದ್ದರಿಂದ ಸದರಿ ಅವರ ಮೇಲೆ ಯಲ್ಲಾಪುರ ವಿಭಾಗದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಹರ್ಷ ಭಾನು ಜಿ ಪಿ (ಭಾ.ಅ.ಸೇ) ರವರ ನಿರ್ದೇಶನದಂತೆ , ಮಂಚಿಕೇರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಮತಿ ಹಿಮಾವತಿ ಭಟ್ ಮಾರ್ಗದರ್ಶನದಲ್ಲಿ ಹಾಗೂ ಇಡಗುಂದಿ ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಶಿಲ್ಪಾ ಎಸ್ ನಾಯ್ಕ ರವರ ನೇತೃತ್ವದಲ್ಲಿ ಸದರಿಯವರನ್ನು ದಸ್ತಗಿರಿ ಮಾಡಿ, ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗಿರುತ್ತದೆ.
ಈ ಕಾರ್ಯಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಗುರುಪ್ರಸಾದ್ ಕೆ, ಬೀಟ್ ವನಪಾಲಕರಾದ ಶ್ರೀ ಕಾಶಿನಾಥ ಯಂಕಂಚಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ.
ಈಗಾಗಲೇ ಮಳೆಯ ಅಬ್ಬರ ಹೆಚ್ಚಾಗಿರುವ ಕಾರಣ ಕುಳಿಮಾಗೋಡ ಜಲಪಾತ, ಶಿರಲೆ ಜಲಪಾತ ಹಾಗೂ ಕಾನೂರು ಜಲಪಾತ ವೀಕ್ಷಣೆಗೆ ನಿರ್ಬಂಧಿಸಲಾಗಿದೆ, ಈ ನಿರ್ಬಂಧ ಮೀರಿದವರ ವಿರುದ್ಧ ಅರಣ್ಯ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳುವುದು ಎಂದು ಇಡಗುಂದಿ ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಶಿಲ್ಪಾ ಎಸ್ ನಾಯ್ಕ ತಿಳಿಸಿದ್ದಾರೆ..