ಗುತ್ತಿಗೆದಾರ ಓಡಿ ಹೋಗಿಲ್ಲ, ರಾಜ್ಯ ಸರ್ಕಾರವೇ ಜವಾಬ್ದಾರಿಯಿಂದ ಓಡಿ ಹೋಗಿದೆ – ಸಚಿವ ಸಂತೋಷ್ ಲಾಡ್ ಜನರ ದಾರಿ ತಪ್ಪಿಸಬಾರದು: ಈರೇಶ ಅಂಚಟಗೇರಿ

Share to all

ಗುತ್ತಿಗೆದಾರ ಓಡಿ ಹೋಗಿಲ್ಲ, ರಾಜ್ಯ ಸರ್ಕಾರವೇ ಜವಾಬ್ದಾರಿಯಿಂದ ಓಡಿ ಹೋಗಿದೆ – ಸಚಿವ ಸಂತೋಷ್ ಲಾಡ್ ಜನರ ದಾರಿ ತಪ್ಪಿಸಬಾರದು: ಈರೇಶ ಅಂಚಟಗೇರಿ

ಧಾರವಾಡ:-ಹುಬ್ಬಳ್ಳಿ ಚೆನ್ನಮ್ಮ ವೃತ್ತದ ಫ್ಲೈಓವರ್ ಕಾಮಗಾರಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು “ಗುತ್ತಿಗೆದಾರ ಓಡಿ ಹೋಗಿದ್ದಾನೆ” ಎಂದು ನೀಡಿರುವ ಹೇಳಿಕೆ ಸಂಪೂರ್ಣ ಜವಾಬ್ದಾರಿರಹಿತ, ಸತ್ಯಕ್ಕೆ ದೂರವಾದ ಹಾಗೂ ತಮ್ಮದೇ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದು ಮಾಜಿ ಮಹಾಪೌರ ಹಾಗೂ ಮಾಜಿ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾದ ಈ ಫ್ಲೈಓವರ್ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಯೋಜನೆಗೆ ಅಗತ್ಯವಾಗಿರುವ ಆಡಳಿತಾತ್ಮಕ ಅನುಮತಿಗಳು, ಇಲಾಖೆಗಳ ಸಮನ್ವಯ, ಸ್ಥಳಾಂತರ ಕಾರ್ಯಗಳು ಹಾಗೂ ರಾಜ್ಯ ಸರ್ಕಾರದಿಂದ ದೊರೆಯಬೇಕಾದ ಸಹಕಾರ ಸಮಯಕ್ಕೆ ಸಿಗದ ಕಾರಣ ಕಾಮಗಾರಿ ವಿಳಂಬವಾಗಿದೆ. ಇಂತಹ ಸಂದರ್ಭದಲ್ಲಿ ಗುತ್ತಿಗೆದಾರರ ಮೇಲೆ ಆರೋಪ ಮಾಡಿ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಸಂತೋಷ್ ಲಾಡ್ ಅವರು ಕೇಂದ್ರ ಸರ್ಕಾರದ ಯೋಜನೆಗಳು ಸಮಯಕ್ಕೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಅದನ್ನು ಬದಿಗಿಟ್ಟು, ಯೋಜನೆಯ ವಿಳಂಬಕ್ಕೆ ಗುತ್ತಿಗೆದಾರರನ್ನು ಬಲಿಪಶುವನ್ನಾಗಿ ಮಾಡುವ ಪ್ರಯತ್ನ ನಡೆಸುತ್ತಿರುವುದು ಅವರ ಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಹುಬ್ಬಳ್ಳಿ-ಧಾರವಾಡದ ಜನರು ಪ್ರತಿನಿತ್ಯ ಸಂಚಾರ ದಟ್ಟಣೆ, ಧೂಳು, ವ್ಯಾಪಾರ ನಷ್ಟ ಹಾಗೂ ಅಪಘಾತದ ಆತಂಕದ ನಡುವೆ ಬದುಕುತ್ತಿದ್ದಾರೆ. ವ್ಯಾಪಾರಿಗಳು ವ್ಯಾಪಾರ ಕಳೆದುಕೊಳ್ಳುತ್ತಿದ್ದಾರೆ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು, ಉಸ್ತುವಾರಿ ಸಚಿವರು ಹೊಣೆಗಾರಿಕೆಯಿಂದ ವರ್ತಿಸದೆ ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಕೇಂದ್ರ ಸರ್ಕಾರವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ ಹಾಗೂ ಇತರ ಮೂಲಸೌಕರ್ಯ ಯೋಜನೆಗಳನ್ನು ನೀಡಿದೆ. ಆದರೆ ರಾಜ್ಯ ಸರ್ಕಾರದ ಅಸಹಕಾರ, ಕಡತಗಳ ವಿಳಂಬ, ಇಲಾಖೆಗಳ ನಡುವಿನ
ಸಮನ್ವಯದ ಕೊರತೆ ಹಾಗೂ ರಾಜಕೀಯ ದ್ವೇಷದ ಧೋರಣೆಯಿಂದ ಅನೇಕ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬುದು ಸಾರ್ವಜನಿಕರಿಗೆ ಗೊತ್ತಿರುವ ಸತ್ಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಕಾಳಜಿ ಇದ್ದರೆ, ಸಚಿವ ಸಂತೋಷ್ ಲಾಡ್ ಅವರು ಕೇಂದ್ರ ಸರ್ಕಾರದ ಯೋಜನೆಗಳಿಗೆ ಅಡ್ಡಿಯಾಗುವ ಆಡಳಿತಾತ್ಮಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಕಾಮಗಾರಿ ವೇಗಗೊಳಿಸಬೇಕು. ಅದನ್ನು ಬಿಟ್ಟು ಜನರ ಗಮನ ಬೇರೆಡೆ ಸೆಳೆಯುವ ಹೇಳಿಕೆಗಳನ್ನು ನೀಡುವುದು ಉಸ್ತುವಾರಿ ಸಚಿವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದರು.

ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ಬದಿಗಿಟ್ಟು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಈರೇಶ ಅಂಚಟಗೇರಿ ಆಗ್ರಹಿಸಿದ್ದಾರೆ.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author