ಅವ್ವನಿಗೆ ಅವ್ವ ಪ್ರಶಸ್ತಿ.. ಮಗನಿಗೆ ಇನ್ನೊಂದು ಪ್ರಶಸ್ತಿ.. ಕುಲಕರ್ಣಿ ಪ್ಯಾಮಿಲಿಗೆ ಡಬಲ್ ಧಮಾಕಾ…

Share to all

ಅವ್ವನಿಗೆ ಅವ್ವ ಪ್ರಶಸ್ತಿ.. ಮಗನಿಗೆ ಇನ್ನೊಂದು ಪ್ರಶಸ್ತಿ.. ಕುಲಕರ್ಣಿ ಪ್ಯಾಮಿಲಿಗೆ “ಡಬಲ್ ಧಮಾಕಾ”…

ಹುಬ್ಬಳ್ಳಿ : ಧಾರವಾಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಪ್ರಸಕ್ತ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಸುನಿತಾ ಕುಲಕರ್ಣಿ ಭಾಜನರಾಗಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಅವ್ವ ಟ್ರಸ್ಟ್ ನಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಅವ್ವ ಪತ್ರಕರ್ತೆ ಪ್ರಶಸ್ತಿ ಪಡೆದಿದ್ದಾರೆ…

ಸುನೀತಾ ರವೀಂದ್ರ ಕುಲಕರ್ಣಿ:
ಇವರು ಪತ್ರಕರ್ತರಾಗಬೇಕು ಎಂಬ ಹಂಬಲ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದವರಲ್ಲ. ಆದರೂ ಸ್ಫುಟವಾದ ಬರವಣಿಗೆ, ನೈಜ ವರದಿಗಾರಿಕೆಯಿಂದ `ಸಂಜೆ ವಾಣಿ’ ಎಂಬ ಸುದ್ದಿಮನೆಯಲ್ಲಿ ಸದ್ದುಮಾಡಿದವರು ಸುನಿತಾ ರವೀಂದ್ರ ಕುಲಕರ್ಣಿ. ೧೯೯೨ ರಿಂದ ೨೦೧೭ರ ವರೆಗೆ ಸಂಜೆ ವಾಣಿ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯಲ್ಲಿ ಶ್ರೀಯುತರು ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಇವರು ಪತ್ರಿಕೋದ್ಯಮಕ್ಕೆ ಆಗಮಿಸಿದ್ದು, ಗುರು ಕೃಪೆಯಿಂದಲೇ ಎಂದರೆ ತಪ್ಪಾಗಲಿಕ್ಕಿಲ್ಲ. ಮಹಾರಾಷ್ಟ್ರದ ಶ್ರೀ ಗೋಂದಾವಲೇಕರ್ ಮಹಾರಾಜರ ಕುರಿತಾಗಿ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಗುರುಗಳು ೧೯೯೨ರಲ್ಲಿ ಹುಬ್ಬಳ್ಳಿಯಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗುರುಗಳ ಪರಮಭಕ್ತರಾಗಿದ್ದ ಸುನಿತಾ ಕುಲಕರ್ಣಿ ಅವರು, ದತ್ತಾವಧೂತರು ಪ್ರತಿದಿನ ಹೇಳುವ ಸತ್ಸಂಗವನ್ನು ಬರೆದುಕೊಂಡು ಸಂಜೆವಾಣಿ ಪತ್ರಿಕೆಗೆ ಪ್ರಕಟಣೆಗಾಗಿ ಕಳುಹಿಸಿಕೊಂಡುತ್ತಿದ್ದರು.

ಗುರುಗಳ ಸತ್ಸಂಗವನ್ನು ಸ್ಫುಟವಾಗಿ, ತೀಕ್ಷ್ಣವಾಗಿ ದಾಖಲುಮಾಡುತ್ತಿದ್ದ ಇವರ ಬರವಣಿಗೆಯ ಶೈಲಿಯನ್ನು ಗಮನಿಸಿದ ಸಂಜೆವಾಣಿ ಪತ್ರಿಕೆಯ ಅಂದಿನ ಸಂಪಾದಕರಾಗಿದ್ದ ಅ. ಚ. ಶಿವಣ್ಣ ಅವರು ಸುನೀತಾ ಕುಲಕರ್ಣಿ ಅವರನ್ನು ಹುಬ್ಬಳ್ಳಿಯ ಆವೃತ್ತಿಗೆ ಉಪಸಂಪಾದಕಿಯಾಗಿ ನೇಮಿಸಿದರು. ಅಲ್ಲಿಂದ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ ಸುನಿತಾ ಅವರು, ಹಿರಿಯ ಉಪಸಂಪಾದಕಿಯಾಗಿ, ಮುಖ್ಯವರದಿಗಾರರಾಗಿ ಹಾಗೂ ೨೦೧೩-೧೭ರ ವರೆಗೆ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

೧೯೯೩-೯೫ರವರೆಗೆ ಹುಬಳ್ಳಿಯಲ್ಲಿ ನಡೆದ ಈದ್ಗಾ ಗಲಭೆ, ೨೦೦೧ರಲ್ಲಿ ನಡೆದ ಗಲಭೆ (ಅಶೋಕ್ ಸಿಂಘಾಲ್ ಬಂದಾಗ) ಹಾಗೂ ೨೦೧೪ರಲ್ಲಿ ಉಮಾ ಭಾರತಿ ಬಂಧನ ಪ್ರಕರಣದ ವರದಿಗಾರಿಕೆ ಇವರಿಗೆ ಮೈಲಿಗಲ್ಲು. ಮಹಿಳೆಯಾಗಿದ್ದರೂ ಗಲಭೆ, ದೊಂಬಿಗಳನ್ನು ಲೆಕ್ಕಿಸದೇ ಸ್ಥಳಕ್ಕೆ ಧಾವಿಸಿ ಜನರ ಕಣ್ಣಿಗೆ ಕಟ್ಟುವಂತೆ ವರದಿ ಮಾಡಿದ್ದರು ಎಂಬುದು ಗಮನಾರ್ಹ. ಅಪರಾಧ ಸುದ್ದಿಗಳ ಶೋಧಕ್ಕಾಗಿ ಸ್ವತಃ ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ, ಶವಗಳ ಕಾಲಿನ ಹೆಬ್ಬರಳಿಗೆ ಹಾಕಲಾಗುತ್ತಿದ್ದ ಗುರುತಿನ ಚೀಟಿಯಿಂದ ಹೆಸರು ಹಾಗೂ ಮಾಹಿತಿ ಪಡೆಯುತ್ತಿದ್ದರು ಎಂದರೆ ನೀವು ನಂಬಲೇಬೇಕು.

ಒಂದು ಕಡೆ ಅವ್ವನಿಗೆ ಪ್ರಶಸ್ತಿ, ಜೊತೆಗೆ ಮಗ ಹಿರಿಯ ವರದಿಗಾರ ಹರ್ಷ ಕುಲಕರ್ಣಿಗೂ ಸಹ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಪ್ರಶಸ್ತಿ ಲಭಿಸಿದೆ.

2025 ರ ಶ್ರೀಮತಿ ಲೀಲಾವತಿ ವಿಶ್ವನಾಥ ಶೆಟ್ಟಿ ಅವರ ಹೆಸರಿನಲ್ಲಿ ಕೊಡುವ ಅತ್ಯುತ್ತಮ ತನಿಖಾ ವರದಿಗೆ ಹರ್ಷ ಕುಲಕರ್ಣಿ ಅವರು ಬರೆದ “ಸಿಲಿಂಡರ್ ಸ್ಪೋಟವೋ ಅಕ್ರಮ ದಂಧೆಯೋ ಎಂಬ ವಿಶೇಷ ತನಿಖಾ ವರದಿಗೆ ಪ್ರಶಸ್ತಿ ಲಭಿಸಿದೆ..

ಪಬ್ಲಿಕ್ ಟಿವಿ..ವಿಜಯ ವಾಣಿ…ದಿಗ್ವಿಜಯ ನ್ಯೂಸ್ ನಲ್ಲಿ ಕೆಲಸ ಮಾಡಿರುವ ಹರ್ಷ ಕುಲಕರ್ಣಿ ಸದ್ಯ ಸಂಯುಕ್ತ ಕರ್ನಾಟಕದಲ್ಲಿ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author