ಪಾಪಿ ಪತ್ನಿಯಿಂದಲೇ ಪತಿ ಡಾಕ್ಟರ್ ಮಡ್೯ರ್..!ಮಗನ ಮೇಲೂ ರಾಕ್ಷಸಿ ದಾಳಿ..
ಧಾರವಾಡದಲ್ಲಿ ಬೆಚ್ಚಿಬೀಳಿಸಿದ ಭೀಕರ ಘಟನೆ.ನಗರದ ರಂಕಾ ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯರೊಬ್ಬರನ್ನು ಅವರ ಪತ್ನಿಯೇ ಚಾಕುವಿನಿಂದ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಯು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಮೃತರನ್ನು ಡಾ. ಕಿರಣ್ ಹೊನಣ್ಣವರ್ (45) ಎಂದು ಗುರುತಿಸಲಾಗಿದೆ. ಪತ್ನಿ ಪ್ರಿಯಾಂಕಾ ಅವರೇ ಗಂಡನನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಅಪಾರ್ಟ್‌ಮೆಂಟ್‌ನ ಒಂದು ಕೊಠಡಿಯಲ್ಲಿ ಡಾ. ಕಿರಣ್ ಹೊನಣ್ಣವರ್ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಬಳಿಕ ಮತ್ತೊಂದು ಕೊಠಡಿಯಲ್ಲಿ ಎಂಟು ವರ್ಷದ ಪುತ್ರ ನೇಹಿತ್ ಮೇಲೂ ಚಾಕುವಿನಿಂದ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಬಾಲಕ ನೇಹಿತ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಧಾರವಾಡ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಆಸ್ಪತ್ರೆಗೆ ತೆರಳಿ ಗಾಯಾಳು ಬಾಲಕನನ್ನು ರವಾನಿಸುವಲ್ಲಿ ಸ್ವತಃ ಮುಂದಾದರು. ಬಾಲಕ ಉಸಿರಾಡುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡರು ಎಂದು ತಿಳಿದುಬಂದಿದೆ.
ಇತ್ತ ರಂಕಾ ಅಪಾರ್ಟ್‌ಮೆಂಟ್‌ನಲ್ಲಿ ಮೃತ ಡಾ. ಕಿರಣ್ ಹೊನಣ್ಣವರ್ ಅವರ ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದವು.
ಈ ಭೀಕರ ಘಟನೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಧಾರವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಮುಂದುವರಿಸಿದ್ದಾರೆ.