ರೈತರಿಗಾಗಿ ಬೀದಿಗಿಳಿದ ಶಾಸಕ ಎಂ.ಆರ್.ಪಾಟೀಲ.ಬೆಳೆ ಒಣಗಿ ರೈತ ಕಂಗಾಲು; ತಾಲೂಕು ಬರಪೀಡಿತ ಎಂದು ಘೋಷಣೆಗೆ ಒತ್ತಾಯ..
ಕುಂದಗೋಳ: ಮಳೆಯನ್ನೇ ನಂಬಿ ಕೃಷಿ ಮಾಡುವ ಕುಂದಗೋಳ ತಾಲೂಕಿನ ರೈತರ ಬದುಕಿನ ಮೇಲೆ ಬರದ ಕರಿಛಾಯೆ ಆವರಿಸಿದೆ. ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆ ಮಳೆ ಕೊರತೆಯಿಂದ ಒಣಗಿ ಹೋಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಆದರೆ ಧಾರವಾಡ ಜಿಲ್ಲೆಯ ಹಲವು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸರ್ಕಾರದ ಪಟ್ಟಿಯಲ್ಲಿ ಕುಂದಗೋಳ ತಾಲೂಕು ಇಲ್ಲದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕುಂದಗೋಳ ಕ್ಷೇತ್ರದ ಶಾಸಕ ಎಂ.ಆರ್. ಪಾಟೀಲ ನೇತೃತ್ವದಲ್ಲಿ ತಾಲೂಕಿನ ಸಾವಿರಾರು ರೈತರು ಪಟ್ಟಣದ ಗಾಳಿ ಮರೆಮ್ಮ ದೇವಸ್ಥಾನದಿಂದ ತಹಶೀಲ್ದಾರರ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು ರೈತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುಂದಗೋಳ ತಾಲೂಕಿನಲ್ಲಿ ಬಹುತೇಕ ಕೃಷಿ ಮಳೆ ಆಧಾರಿತವಾಗಿದ್ದು, ರೈತರು ಮುಂಗಾರು ಮಳೆಯನ್ನೇ ನಂಬಿ ಬಿತ್ತನೆ ಮಾಡುತ್ತಾರೆ. ಈ ಬಾರಿ ನಿರೀಕ್ಷಿತ ಮಳೆಯಾಗದ ಪರಿಣಾಮ ಬಿತ್ತನೆ ಮಾಡಿದ ಬೆಳೆಗಳು ಒಣಗುತ್ತಿವೆ. ಹಲವು ರೈತರು ಬೆಳೆಯನ್ನು ಉಳಿಸಿಕೊಳ್ಳಲಾಗದೆ ಹರಗಿ ಹಾಕುವ ಸ್ಥಿತಿಗೆ ತಲುಪಿದ್ದಾರೆ. ಬೆಳೆ ಕೈಕೊಟ್ಟಿರುವುದರಿಂದ ಸಾಲ ತೀರಿಸುವುದು ಹೇಗೆ ಎಂಬ ಆತಂಕವೂ ರೈತರನ್ನು ಕಾಡುತ್ತಿದೆ.
“ಹೊಲದಲ್ಲಿ ಬೆಳೆ ಇಲ್ಲ. ಸಾಲ ಮಾತ್ರ ಉಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಕುಂದಗೋಳವನ್ನು ಬರಪೀಡಿತ ತಾಲೂಕು ಎಂದು ಘೋಷಿಸದೇ ಇರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ” ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ ರೈತರು, ಕುಂದಗೋಳವನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಬೇಕು, ರೈತರ ಖಾತೆಗೆ 50 ಸಾವಿರ ರೂ ಪರಿಹಾರ ನೀಡಬೇಕು, ಜಾನುವಾರುಗಳಿಗೆ ಮೇವು ಬ್ಯಾಂಕ್ ಆರಂಭಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬೆಳೆ ವಿಮೆ ಪಾವತಿಸಿದ ರೈತರಿಗೆ ಕೂಡಲೇ ವಿಮಾ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕೂಡಲೇ ವಸ್ತುಸ್ಥಿತಿಯನ್ನು ಮರುಪರಿಶೀಲಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಆಮರಣಾಂತ ಉಪವಾಸ ಸೇರಿದಂತೆ ತೀವ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಸಿದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ, “ಇದು ಪಕ್ಷಾತೀತ ಹೋರಾಟ. ರೈತರು ಮಳೆಯನ್ನೇ ನಂಬಿ ಬದುಕುತ್ತಿದ್ದಾರೆ. ಸರ್ಕಾರ ಕಣ್ಣು ತೆರೆದು ಕುಂದಗೋಳದ ವಾಸ್ತವ ಪರಿಸ್ಥಿತಿಯನ್ನು ಅರಿತು ಬರ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶ್ರೀ ಶಿಥಿಕಂಠೇಶ್ವರ ಮಹಾ ಸ್ವಾಮೀಜಿ ಶ್ರೀ ಕಲ್ಯಾಣ್ ಪುರ್ ಬಸವಣ್ಣ ಅಜ್ಜಾರು ಶಿವಾನಂದ ಮಠದ ಶಿವಾನಂದ ಸ್ವಾಮಿಗಳು ರೈತ ಹೋರಾಟಕ್ಕೆ ಬೆಂಬಲ ನೀಡಿದರು
ಪ್ರತಿಭಟನೆಯಲ್ಲಿ ರಂಗನಗೌಡ ಪಾಟೀಲ ನಾಗನಗೌಡ ಸಾತ್ಮಾರ್ ಬಸವನಗೌಡ ಹೇಮರೆಡ್ಡಿ ಮಲ್ಲಿಕಾರ್ಜುನ ಖಾನಗೌಡ್ರು ನಿಂಗನಗೌಡ ಮಾರಿಗೌಡ್ರು ಗುರುಸಿದ್ದಪ್ಪ ಬಂಕದ ಮಾಂತೇಶ್ ಶ್ಯಾಗೋಟಿ ಗುರು ಪಾಟೀಲ್ ರವಿಗೌಡ ಪಾಟೀಲ್ ಪ್ರಕಾಶಗೌಡ ಪಾಟೀಲ್ ರಾಘವೇಂದ್ರ ಗೌಡ ಪಾಟೀಲ್ ಎಲ್ ರೆಡ್ಡಿ ಯರಗುಪ್ಪಿ ರಮೇಶಗೌಡ ಮೇಲಮಾಳಗಿ ಸಂತೋಷ್ ನಾಗರಾಜು ಸೂಬರಗಟ್ಟಿ ಮಲ್ಲಿಗವಾಡ ವಿವಿಧ ರೈತಪರ ಸಂಘಟನೆಗಳ ಮುಖಂಡರು ಹಾಗೂ ತಾಲೂಕಿನ ನೂರಾರು ರೈತರು ಪಾಲ್ಗೊಂಡಿದ್ದರು.