ಧಾರವಾಡ:-ಧಾರವಾಡದಲ್ಲಿ SDA ನೌಕರ ರೇವಪ್ಪ ಅವರ ಆತ್ಮಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ರೇವಪ್ಪ, ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಆರೋಪದಡಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ, ಸಂಬಂಧಪಟ್ಟವರಿಗೆ ಹಣ ತಲುಪಿಸಿದ್ದರೂ ಉದ್ಯೋಗ ಕೊಡಿಸಲು ಸಾಧ್ಯವಾಗದೆ ಹಾಗೂ ಹಣ ಮರಳಿಸಲು ಒತ್ತಡ ಎದುರಿಸಿದ್ದರಿಂದ ರೇವಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ರೇವಪ್ಪ ಅವರ ಪತ್ನಿ ಲಕ್ಷ್ಮೀಬಾಯಿ ನೀಡಿದ ದೂರಿನ ಮೇರೆಗೆ ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಲಾರಕೊಪ್ಪ ಗ್ರಾಮದ ನಿವಾಸಿಯಾಗಿದ್ದ ರೇವಪ್ಪ, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವಕರಿಗೆ ವಿವಿಧ ಇಲಾಖೆಗಳ ಹುದ್ದೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಒಳಚರಂಡಿ ಮತ್ತು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE), ಆರ್ಟಿಒ, ಅಬಕಾರಿ ಇಲಾಖೆಯ ಪಿಎಸ್ಐ, ಎಸ್ಡಿಎ ಹಾಗೂ ಎಫ್ಡಿಎ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ಮಧ್ಯವರ್ತಿಯಾಗಿ ಸುಮಾರು ₹4 ಕೋಟಿ ಹಣ ಸಂಗ್ರಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ.