ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಕಾರ್ಯಾಚರಣೆ: ರೂ1.15 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ವಶ; ಇಬ್ಬರು ಅಂತರ ಜಿಲ್ಲಾ ಕಳ್ಳರ ಬಂಧನ
ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಪೊಲೀಸರು ನಡೆಸಿದ ನೈಟ್ ರೌಂಡ್ ಕಾರ್ಯಾಚರಣೆಯಲ್ಲಿ ಅಂತರ ಜಿಲ್ಲಾ ಕಳ್ಳರ ಗ್ಯಾಂಗ್ ಒಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1 ಕೋಟಿ 15 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ
ಲಕ್ಷ್ಮೇಶ್ವರ ತಾಲ್ಲೂಕಿನ ಬಾಳೇಹೊಸೂರಿನ ಶಿವರಾಜ ಹನುಮಂತಪ್ಪ ಮೋಡಿಕೇರ ಹಾಗೂ ಸಿಂಧನೂರು ತಾಲ್ಲೂಕಿನ ಅಂಬಾಪುರದ ಅಶೋಕ ಅಲಿಯಾಸ್ ರಮೇಶ್ ಶಿವಪ್ಪ ಕೊಂಜೆಕುರವರ್ ಬಂಧಿತ ಆರೋಪಿಗಳು. ಈ ಜಾಲದಲ್ಲಿದ್ದ ಇನ್ನುಳಿದ ನಾಲ್ವರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಿರೇಸೂರ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಹಾಗೂ ಕೇವಲ ಎರಡು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬಂಗಾರದ ಅಂಗಡಿಯ ಕಳ್ಳತನ ಪ್ರಕರಣಗಳನ್ನು ಭೇದಿಸಲು ಪೋಲೀಸರು ಯಶಶ್ವಿಯಾಗಿದ್ದಾರೆ. ಬಂಧಿತರಿಂದ 310 ಗ್ರಾಂ ಬಂಗಾರದ ಆಭರಣಗಳು, 26 ಕೆ.ಜಿ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಬುಲೆರೋ ವಾಹನವನ್ನು ಜಪ್ತು ಮಾಡಲಾಗಿದೆ.
ಹುಬ್ಬಳ್ಳಿ ಗ್ರಾಮೀಣ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಹಾಗೂ ನವಲಗುಂದ ಪಿಐ ನೇತೃತ್ವದಲ್ಲಿ ಕ್ರೈಂ ಟೀಮಿನ: ಎನ್. ಎಮ್. ಹೊನ್ನಪ್ಪನವರ (ಎಎಸ್‌ಐ), ಸಿಬ್ಬಂದಿಯಾದ ಎಚ್. ಬಿ. ಐಹೋಳಿ, ಅಬ್ದುಲ್ ಕಾಕರ, ಚನ್ನಪ್ಪ ಬಳ್ಳೊಳ್ಳಿ, ಮಾಂತೇಶ ಮದ್ದೀನ ಪ್ರಕರಣ ಬೇಧಿಸುವಲ್ಲಿ ಯಶಶ್ವಿಯಾಗಿದ್ದಾರೆ.