“ನಕಲಿ ದಾಖಲೆಗಳ ಡಾನ್..! ಅಮಾಯಕರಿಗೆ ಟೋಪಿ ಹಾಕುವ ಟೋಪಿವಾಲಾ..
ಹುಬ್ಬಳ್ಳಿ: ಅವಳಿ ನಗರದ ಜನರೇ ಎಚ್ಚರ..! ಖಾಲಿ ಜಾಗ ಕಂಡರೆ ಸಾಕು, ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡುತ್ತಿರುವ ಖತರ್ನಾಕ್ ಭೂ ಖದೀಮನ ಜಾಲ ಈಗ ಬೆಳಕಿಗೆ ಬರುತ್ತಿದೆ. ನಗರದ ಮುಗ್ಧ ಜನರನ್ನೇ ಟಾರ್ಗೆಟ್ ಮಾಡುತ್ತಿರುವ ಈ ಗ್ಯಾಂಗ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಹೌದು…ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಖಾಲಿ ನಿವೇಶನಗಳು, ಕೃಷಿ ಜಮೀನುಗಳು ಮತ್ತು ವಾರಸುದಾರರಿಲ್ಲದ ಆಸ್ತಿಗಳ ಮೇಲೆ ಈ ತಂಡದ ಕಣ್ಣು ಬೀಳುತ್ತಿದ್ದಂತೆಯೇ ಕೆಲವೇ ದಿನಗಳಲ್ಲಿ ನಕಲಿ ದಾಖಲೆಗಳು ಸಿದ್ಧವಾಗುತ್ತವೆ ಎನ್ನಲಾಗಿದೆ. ನಂತರ ಕಡಿಮೆ ಬೆಲೆಯ ಆಮಿಷವೊಡ್ಡಿ ಅಮಾಯಕರನ್ನು ಬಲೆಗೆ ಬೀಳಿಸುವುದು ಈ ಜಾಲದ ಪ್ರಮುಖ ತಂತ್ರ ಎನ್ನಲಾಗುತ್ತಿದೆ.
ಇದು ಒಬ್ಬ ವ್ಯಕ್ತಿಯ ಕೆಲಸವಲ್ಲ. ಇದರ ಹಿಂದೆ ದೊಡ್ಡ ಮಟ್ಟದ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬಾಂಡ್ ಪತ್ರಗಳು ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸುವ ವಿಶೇಷ ತಂಡವೇ ಕೆಲಸ ಮಾಡುತ್ತಿದೆ ಎಂದು ವಂಚನೆಗೆ ಒಳಗಾದವರು ಆರೋಪಿಸಿದ್ದಾರೆ.
ಇನ್ನೂ ಆತಂಕಕಾರಿ ಸಂಗತಿಯೆಂದರೆ, ಕೆಲ ಸಬ್-ರಿಜಿಸ್ಟ್ರಾರ್ ಕಚೇರಿಗಳ ಸಿಬ್ಬಂದಿಯೂ ಈ ಜಾಲಕ್ಕೆ ಮಾಹಿತಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇದರ ಪರಿಣಾಮವಾಗಿ ಜೀವನಪೂರ್ತಿ ದುಡಿದು ಸಂಪಾದಿಸಿದ ಹಣವನ್ನು ಕಳೆದುಕೊಂಡ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲೆ ಕೂಡ ಆಗಿವೆ.
ಇಷ್ಟೆಲ್ಲಾ ಗಂಭೀರ ಆರೋಪಗಳು ಕೇಳಿಬರುತ್ತಿದ್ದರೂ, ಆರೋಪಿಗಳ ವಿರುದ್ಧ ಇನ್ನೂ ಕಠಿಣ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೆಲವರು ಪೊಲೀಸರ ಕೈಮಿಲಾಯಿಸುವಿಕೆ ಬಗ್ಗೆ ಗುಸುಗುಸು ಮಾತುಗಳನ್ನೂ ಆಡುತ್ತಿದ್ದಾರೆ.
ಇದೀಗ ವಂಚನೆಗೆ ಒಳಗಾದವರು ಕೂಡ ಈ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಈ ಭೂ ಮಾಫಿಯಾದ ಹಿಂದಿರುವ ಅಸಲಿ ಮುಖಗಳು ಯಾರು? ನಕಲಿ ದಾಖಲೆಗಳ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿದೆ? ಇದರ ಹಿಂದೆ ಇರುವ ಅಧಿಕಾರಿಗಳು ಹಾಗೂ ಪ್ರಭಾವಿಗಳು ಯಾರು ಎಂಬ
ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಮುಂದಿನ ಸಂಚಿಕೆಯಲ್ಲಿ ಉದಯ ವಾರ್ತೆ ಬರಿರಂಗಪಡಿಸಲಿದೆ.