ಶ್ರೀ ದಿಂಗಾಲೇಶ್ವರ ಸ್ವಾಮೀಜಿಯಿಂದ ಸಕ್ಕರೆ ತ್ಯಜಿಸುವ ಶಪಥ: ರೈತ ಹೋರಾಟಕ್ಕೆ ಬೆಂಬಲ

Share to all

ಶ್ರೀ ದಿಂಗಾಲೇಶ್ವರ ಸ್ವಾಮೀಜಿಯಿಂದ ಸಕ್ಕರೆ ತ್ಯಜಿಸುವ ಶಪಥ: ರೈತ ಹೋರಾಟಕ್ಕೆ ಬೆಂಬಲ

​ಹುಬ್ಬಳ್ಳಿ: ದೇಶದಲ್ಲಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರಸ್ತೆಗಿಳಿದು ಹೋರಾಟ ಮಾಡುತ್ತಿರುವ ಪರಿಸ್ಥಿತಿ ಕಳವಳಕಾರಿಯಾಗಿದ್ದು, ರೈತರಿಗೆ ನ್ಯಾಯ ದೊರೆಯುವವರೆಗೆ ತಾವು ಸಕ್ಕರೆ ಸೇವನೆಯನ್ನು ತ್ಯಜಿಸುವುದಾಗಿ ಫಕೀರ್ ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರು ಗಂಭೀರ ಪ್ರತಿಜ್ಞೆ ಮಾಡಿದರು.

​ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಸಿಲಿನಲ್ಲಿ ಹೆಂಡತಿ-ಮಕ್ಕಳನ್ನು, ಜಾನುವಾರುಗಳನ್ನು ಮನೆಯಲ್ಲಿ ಬಿಟ್ಟು ರಾತ್ರಿ ರಸ್ತೆಯಲ್ಲಿ ಮಲಗಿರುವ ರೈತರ ಸ್ಥಿತಿ ನಾಗರಿಕತೆ ಮತ್ತು ಮಾನವೀಯತೆಗೆ ತಲೆತಗ್ಗಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​​ಪೆಟ್ರೋಲ್ ಬೆಲೆಯನ್ನು ರಾತ್ರೋರಾತ್ರಿ ಹೆಚ್ಚಿಸುವ ಸರ್ಕಾರಗಳು, ಕೃಷಿಗೆ ಬಳಸುವ ಗೊಬ್ಬರ, ವಿದ್ಯುತ್, ನೀರು ಮತ್ತು ಕೂಲಿ ಹೆಚ್ಚಾದಾಗ ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಯಾಕೆ ಹೆಚ್ಚಿಸುವುದಿಲ್ಲ. ಕೇಂದ್ರ ಸರ್ಕಾರವು 2004-2006ರ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದೆ ರೈತರಿಗೆ ಮೋಸ ಮಾಡುತ್ತಿದೆ. ಇದು ರೈತ ವಿರೋಧಿ ಭಯೋತ್ಪಾದನಾ ನೀತಿಯಂತಿದೆ ಎಂದು ವಾಗ್ದಾಳಿ ನಡೆಸಿದರು.

ಕೇವಲ ರೈತರು ಮಾತ್ರವಲ್ಲದೆ, ರಾಜ್ಯದ ಎಲ್ಲ ಮಠಾಧೀಶರು ಪೂಜೆ-ಪುರಸ್ಕಾರಗಳನ್ನು ಬದಿಗಿಟ್ಟು ರಸ್ತೆಬದಿ ರೈತರ ಜೊತೆ ಕುಳಿತುಕೊಳ್ಳಬೇಕು. ಸಾಹಿತಿಗಳು, ಕಲಾವಿದರು, ಸಿನಿಮಾ ನಟರು ಮತ್ತು ಮಾಧ್ಯಮಗಳು ರೈತರ ಪರವಾಗಿ ನಿಲ್ಲಬೇಕು .ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಹುಚ್ಚು ಸಾಹಸಕ್ಕೆ ಕೈಹಾಕದೆ, ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕಿವಿಮಾತು ಹೇಳಿದರು. ರೈತರು ಈ ದೇಶದ ಮಾಲೀಕರೇ ಹೊರತು ಆಳುಗಳಲ್ಲ. ರೈತರ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ರೈತರು ಹೋರಾಟ ಮಾಡುತ್ತಿರುವ ಧಾರವಾಡದ ಎರಿಕೊಪ್ಪ ಹೆದ್ದಾರಿ ಹಾಗೂ ಬೆಳಗಾವಿಯ ಹತ್ತರಗಿ ಬಳಿಯ ಹೆದ್ದಾರಿ ಸ್ಥಳಕ್ಕೆ ತೆರಳಿ, ರೈತರೊಟ್ಟಿಗೆ ಹೋರಾಟ ಮಾಡಲಾಗುವುದು ಎಂದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author