ಅಪರಿಚಿತರ ಗ್ಯಾಂಗ್ವೊಂದು ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮನೆಗೆ ನುಗ್ಗಿ ಕಿಡಿಗೇಡಿಗಳು ಹಲ್ಲೆಗೆ ಯತ್ನಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಇಸ್ಮಾಯಿಲ್ ತಮಟಗಾರ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿರುವ ಬಗ್ಗೆ ಸಂಬಂಧಿಕರು ಆರೋಪಿಸಿದ್ದಾರೆ. ಅಂಜುಮನ್ ಸಂಸ್ಥೆಯ ಕಚೇರಿಯಲ್ಲಿಯೇ 10ಕ್ಕೂ ಹೆಚ್ಚು ಯುವಕರ ಗ್ಯಾಂಗ್ ಇಸ್ಮಾಯಿಲ್ ಹಲ್ಲೆಗೆ ಮುಂದಾಗಿತ್ತು.
ಆದರೆ ಅಲ್ಲಿ ಅವರಿಲ್ಲದ ಕಾರಣ, ಮನೆಗೆ ನುಗ್ಗಿದಾಗ ಮನೆಯಲ್ಲೂ ಇಲ್ಲದೇ ಇದ್ದುದರಿಂದ ಮನೆಯವರೊಂದಿಗೆ ಅಸಭ್ಯವಾಗಿ ವರ್ತನೆ ತೋರಿದ್ದಾರೆ. ಇಸ್ಮಾಯಿಲ್ನ್ನು ಕೊಲ್ಲಲು ಬಂದಿದ್ದೇವೆ ಎಂದಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ. ಆರೋಪಿಗಳು ಲಂಗೋಟಿ ಜಮಾದಾರ್ ಗಲ್ಲಿಯ ಅಂಜುಮನ್ ಹಾಸ್ಟೆಲ್ ಬಳಿ ಹಲ್ಲೆಗೆ ಸ್ಕೆಚ್ ಹಾಕಿದ್ದರಂತೆ. ಆದರೆ ಇಸ್ಮಾಯಿಲ್ ಇಲ್ಲದ ಕಾರಣಕ್ಕೆ ಮನೆಯವರೊಂದಿಗೆ ಜಗಳ ತೆಗೆದಿದ್ದಾರೆ ಎಂದು ಆತಂಕಗೊಂಡ ಕುಟುಂಬಸ್ಥರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಘಟನೆ ಬಗ್ಗೆ ಧಾರವಾಡದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸುದ್ದಿಗೋಷ್ಠಿ ಮಾಡಿದ್ದು, ಮುಸ್ಲಿಂ ಹುಡುಗರಿಂದಲೇ ಮುಸ್ಲಿಂ ನಾಯಕರನ್ನು ಹೊಡೆಸುವ ಪ್ಲ್ಯಾನ್ ಇದು. ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಮಣಕಿಲ್ಲಾ, ರಸೂಲಪುರ ಗಲ್ಲಿಯಲ್ಲಿ ಚಾಕು ಹಿಡಿದುಕೊಂಡು ನಿನ್ನೆ ಓಡಾಡಿದ್ದಾರೆ. ಪೊಲೀಸರು ಮತ್ತು ಪೊಲೀಸ್ ಕಮಿಷನರ್ ಮೇಲೆ ನಂಬಿಕೆ ಇದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಹೇಳಿದ್ದಾರೆ.