ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೆ ಒಂದಲ್ಲ ಒಂದು ಸಂಕಷ್ಟ ತಂದೊಡ್ಡುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಇಂದು ವಿಚಾಋಣೆ ನಡೆದಿದೆ. ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸುದೀರ್ಘವಾಗಿ ವಾದ ಮಂಡಿಸಿದರು. ಇನ್ನು ರಾಜ್ಯಪಾಲರ ಪರ ವಕೀಲ ತುಷಾರ್ ಮೆಹ್ತಾ ಅವರು ಶನಿವಾರ ವಾದ ಮಂಡಿಸುವುದಾಗಿ ಕೋರ್ಟ್ಗೆ ತಿಳಿಸಿದರು.
ಇದಕ್ಕೆ ಕೋರ್ಟ್ ಸಹ ಒಪ್ಪಿಗೆ ನೀಡಿದೆ. ಇದರೊಂದಿಗೆ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಕೋರ್ಟ್, ಆಗಸ್ಟ್ 31 ಬೆಳಗ್ಗೆ 10:30ಕ್ಕೆ ಮುಂದೂಡಿತು. ಅಲ್ಲದೇ ಈ ಹಿಂದಿನ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮುಂದುವರಿಸಿದೆ. ಇನ್ನು ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್ ಗೂ ಸಹ ಸೂಚನೆ ನೀಡಿದೆ.
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರವನ್ನು ಪ್ರಸ್ತಾಸಿರುವ ಡಿಸಿಎಂ ಡಿಕೆ ಶಿವಕುಮಾರ್, ಹೆಚ್ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಮ್ಮ ಬಿಗ್ ಬ್ರದರ್ ಕುಮಾರಸ್ವಾಮಿ ಬಹಳ ಪ್ರಾಮಾಣಿಕರು. ಅವರು ಮಾಡುವುದೆಲ್ಲ ಸಾಚಾ ಕೆಲಸ ಎಂದು ತಿವಿದಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಹಿ ಫೋರ್ಜರಿ ಆಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಅದಕ್ಕೂ ಡಿಸಿಎಂ ತಿರುಗೇಟು ನೀಡಿದ್ದಾರೆ.