ಬೆಂಗಳೂರು: ಯೋಗೇಶ್ವರ್ ರಾಜೀನಾಮೆ ಕೊಟ್ಟ ಮೇಲೆ ಸೋದರಿಕೆ ಸಂಬಂಧವೇನೂ ಇಲ್ಲ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು. ಜಗನ್ನಾಥ ಭವನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ರಾಜೀನಾಮೆ ಕೊಟ್ಟ ಮೇಲೆ ಸೋದರಿಕೆ ಸಂಬಂಧವೇನೂ ಇಲ್ಲ. ನಾವು ಎನ್‍ಡಿಎ ಆಗಿ ಚನ್ನಪಟ್ಟಣದಲ್ಲಿ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ನಾವು ನಿರ್ಣಯಿಸಿ ಚರ್ಚೆ ಮಾಡುವುದಿಲ್ಲ.
ಚರ್ಚಿಸಿ ನಿರ್ಣಯಕ್ಕೆ ಬರುತ್ತೇವೆ. ಒಂದೂವರೆ ಎರಡು ತಿಂಗಳ ಹಿಂದೆಯೇ ನಾವು ಚನ್ನಪಟ್ಟಣದ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿಯವರ ಜೊತೆ ಚರ್ಚಿಸಿದ್ದೇವೆ. ಚನ್ನಪಟ್ಟಣ ಕುಮಾರಸ್ವಾಮಿಯವರು ಪ್ರತಿನಿಧಿಸಿದ ಕ್ಷೇತ್ರ. ಏಕಪಕ್ಷೀಯ ನಿರ್ಣಯ ಹೇರುವುದು, ನಮ್ಮ ನಿರ್ಣಯ ಹೇರುವುದಾಗಲೀ ಮೈತ್ರಿ ಅನಿಸುವುದಿಲ್ಲ. ಇಬ್ಬರೂ ಸೇರಿ ನಿರ್ಣಯಿಸಬೇಕಾಗುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಸಿ.ಟಿ ರವಿ ಉತ್ತರಿಸಿದರು.
ಯೋಗೇಶ್ವರ್ ಅವರು ಮಹತ್ವಾಕಾಂಕ್ಷೆ ಇಟ್ಟುಕೊಂಡ ರಾಜಕಾರಣಿ. ಸುದೀರ್ಘ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ರಾಜಕಾರಣ ಮಾಡಿದವರು. ಡಿ.ಕೆ ಶಿವಕುಮಾರ್ ಮತ್ತು ಅವರ ನಡುವಿನ ಶತ್ರುತ್ವ ಇವತ್ತು ನಿನ್ನೆಯದಲ್ಲ. ಹುಲಿ ಬೋನಿಗೆ ಹೋಗಿದ್ದಾರೆ. ಒಂದೋ ಹುಲಿಯನ್ನು ಮಣಿಸಬೇಕು. ಇಲ್ಲವೇ ಹುಲಿಗೆ ಬಲಿ ಆಗಬೇಕು ಎಂದು ತಿಳಿಸಿದರು.