ಮರಳು ಮಾಫಿಯಾ..ಧಾರವಾಡದ ಇಬ್ಬರು ಪೋಲೀಸರು ಆರೆಸ್ಟ್..ಇಬ್ಬರು ಪೋಲೀಸರು ಪರಾರಿ.. ಲಂಚ..ಲಂಚ..ನಾಚಿಕೆಯಾಗಬೇಕು..
ಧಾರವಾಡ:-ಮರಳು ಲಾರಿ ಬಿಡಲು ಮೂವತ್ತು ಸಾವಿರ ಲಂಚದ ಆರೋಪದ ಮೇಲೆ ಧಾರವಾಡದ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಇನ್ನಿಬ್ಬರು ಪೋಲೀಸರು ಪರಾರಿಯಾಗಿದ್ದಾರೆ.
ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಬಂಧಿತರನ್ನು ಧಾರವಾಡ ನಗರ ಠಾಣೆಯ ಹೆಡ್‌ಕಾನ್ಸ್ಟೇಬಲ್ ಹಸನ್‌ಸಾಬ ನದಾಫ್ ಹಾಗೂ ಇಕ್ಬಾಲ್ ನದಾಫ್ ಎಂದು ಗುರುತಿಸಲಾಗಿದೆ.
ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಎಂಬುವವರು ಮರಳು ಸಾಗಿಸುತ್ತಿದ್ದ ಲಾರಿಯನ್ನು ಅವಳಿ ನಗರ ವ್ಯಾಪ್ತಿಯಲ್ಲಿ ಬಿಡಲು ₹30 ಸಾವಿರ ನೀಡಬೇಕು ಎಂದು ಆರೋಪಿಗಳು ಒತ್ತಾಯಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಣವನ್ನು ಫೋನ್‌ಪೇ ಮೂಲಕ ಪಾವತಿಸಲಾಗಿತ್ತು ಎಂದು ವರದಿಯಾಗಿದೆ. ಬಳಿಕ ಲಾರಿ ಚಾಲಕ ಧಾರವಾಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಹಣದ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಸಹ ವಶಕ್ಕೆ ಪಡೆದು, ಹಣದ ವಹಿವಾಟು ಹಾಗೂ ಲಾರಿ ಚಾಲಕನೊಂದಿಗೆ ನಡೆದ ಸಂವಹನದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಮರಳು ಮಾಫಿಯಾದಲ್ಲಿ ಇನ್ನೂ ಇಬ್ಬರು ಪೋಲೀಸರು ಪರಾರಿಯಾಗಿದ್ದು ಅವರ ಹೆಸರನ್ನು ಲೋಕಾಯುಕ್ತ ಪೋಲೀಸರು ದೂರಿನಲ್ಲಿ ದಾಖಲಿಸಿದ್ದಾರೆ.ಇನ್ನೂ ಸಿಪಿಐ ಶಿವಾನಂದ ಕಮತಗಿ ಅವರ ಹೆಸರನ್ನು ಕೂಡಾ ಪೋನ್ ಸಂಭಾಷಣೆ ವೇಳೆ ಬಳಸಿಕೊಳ್ಳಲಾಗಿದೆ.
ಈ ಒಂದು ಮರಳು ಮಾಫಿಯಾದಲ್ಲಿ ಯಾರು ಯಾರು ಇದ್ದಾರೆ ಅನ್ನೋದರ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಲಂಚ ಸ್ವೀಕಾರದ ಆರೋಪದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡ ಪೊಲೀಸ್ ವಲಯದಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿದೆ.